ರಾಜ ಒಡೆಯರ್ 2 

ಮೈಸೂರು ರಾಜವಂಶದ ದೊರೆ (1637-38) ಮೊದಲನೆಯ ರಾಜ ಒಡೆಯನ ಮಗ. ತಂದೆಯ ನಿಧನಾನಂತರ ಜನಿಸಿದ. ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ 6ನೆಯ ಚಾಮರಾಜನ ಮರಣಾನಂತರ ಈತ ಪಟ್ಟಕ್ಕೆ ಬಂದ. ಶಾಸನಗಳಲ್ಲಿ ಮತ್ತು ಸಾಹಿತ್ಯ ಗ್ರಂಥಗಳಲ್ಲಿ ಈತನನ್ನು ಇಮ್ಮಡಿ ರಾಜರಸ. ಇಮ್ಮಡಿ ರಾಜೊಡೆಯರ್, ಇಮ್ಮಡಿ ರಾಜ ಎಂದು ಕರೆಯಲಾಗಿದೆ.
ಈತ ಪಟ್ಟಕ್ಕೆ ಬರುವ ವೇಳೆಗಾಗಲೇ ಅರಸೊತ್ತಿಗೆಯ ಮೇಲೆ ದಳವಾಯಿಗಳ ಪ್ರಾಬಲ್ಯ ಅಧಿಕಗೊಳ್ಳುತ್ತ ಬಂದಿತ್ತು. ಇವನ ಕಾಲದಲ್ಲಿ ವಿಕ್ರಮರಾಯ ದಳವಾಯಿಯಾಗಿ ಮುಂದುವರಿದ. 1638 ರಲ್ಲಿ ನಡೆದ ಅರಕಲಗೂಡಿನ ಮುತ್ತಿಗೆ ಇವನ ಆಳ್ವಿಕೆಯ ಕಾಲದ ಒಂದು ಮುಖ್ಯ ಘಟನೆ. ದಳವಾಯಿ ವಿಕ್ರಮರಾಯ ಸೇನೆಯೊಂದಿಗೆ ಅರಕಲಗೂಡಿಗೆ ಮುತ್ತಿಗೆ ಹಾಕಿ ಅಲ್ಲಿಯ ಒಡೆಯ ಕೃಷ್ಣಪ್ಪ ನಾಯಕನನ್ನು ಸೋಲಿಸಿ ಅವನಿಂದ ಕಪ್ಪಕಾಣಿಕೆಗಳನ್ನೂ ವಸೂಲು ಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಹಿಂದಿರುಗಿದ. 

ರಾಜ ಒಡೆಯ ಪ್ರತಿಭಾನ್ವಿತನಾದ ಅರಸ. ಇವನ ಧೈರ್ಯ ಮತ್ತು ಪರಾಕ್ರಮಗಳು ಸಾಹಿತ್ಯ ಗ್ರಂಥಗಳಲ್ಲಿ ಹಾಗೂ ಶಾಸನಗಳಲ್ಲಿ ಪ್ರತಿಧ್ವನಿತವಾಗಿವೆ. ಈತ ಕೇವಲ ಒಂದೂವರೆ ವರ್ಷಗಳ ಕಾಲ ಆಳಿದನಾದರೂ ಇವನ ಆಳ್ವಿಕೆ ಜನಪ್ರಿಯವಾಗಿತ್ತು. ದಕ್ಷತೆಗೆ ಹೆಸರಾಗಿತ್ತು. ತನ್ನ ಪೂರ್ವಿಕರ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದನಲ್ಲದೇ ಸಾಹಿತ್ಯ, ಸಂಸ್ಕøತಿ ಮತ್ತು ಕಲೆಯ ಪೋಷಕನೂ ಆಗಿದ್ದ. ವಿಷ್ಣುವಿನ ಪರಮ ಭಕ್ತನಾದ ಈತ ವೈಷ್ಣವ ಧರ್ಮಕ್ಕೆ ಸಂಬಂಧಿಸಿದ ಭಕ್ತಿಪ್ರಧಾನವಾದ ಸಾಹಿತ್ಯದ ಪಠಣವನ್ನು ಕೇಳುವುದರಲ್ಲಿ ಉತ್ಸುಕನಾಗಿದ್ದ. ಒಮ್ಮೆ ಇವನ ದೇಹಸ್ಥಿತಿ ಸರಿಯಿಲ್ಲದ ಸಂದರ್ಭದಲ್ಲಿ ದಳವಾಯಿ ವಿಕ್ರಮರಾಯ ಆಸ್ಥಾನದ ವೈದ್ಯನ ಮೂಲಕ ವಿಷ ಉಣಿಸಿ ಇವನನ್ನು ಕೊಲೆ ಮಾಡಿದ.
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
											 *